ಪ್ರಮಾತೃವಾದ	-
ವಸ್ತುವಿನ ಅಸ್ತಿತ್ವ ಮನಸ್ಸಿಗೆ ಅಧೀನವೇ ಸ್ವತಂತ್ರವೇ ಎಂಬ ಮುಖ್ಯ ಪ್ರಶ್ನೆಗೆ ತತ್ತ್ವಶಾಸ್ತ್ರಜ್ಞರಲ್ಲಿ ಕಾಣಬಹುದಾದ ಎರಡು ಪರಿಹಾರಗಳಲ್ಲಿ ಒಂದು (ಸಬ್‍ಜೆಕ್ಟಿವಿಸಂ). ಇನ್ನೊಂದು ಪರಿಹಾರ ವಾಸ್ತವಿಕವಾದ (ರಿಯಲಿಸಂ). ತನ್ನ ಅಸ್ತಿತ್ವಕ್ಕೆ ಮನಸ್ಸನ್ನು ಅವಲಂಬಿಸದೇ ವಸ್ತು ಸ್ವತಂತ್ರವಾಗಿ ಇರಬಲ್ಲದೆಂಬುದು ವಾಸ್ತವಿಕವಾದ. ವಸ್ತುವಿನ ಇರವು ಅರಿವಿಗೆ ಅಧೀನ ಎಂಬುದು ಪ್ರಮಾತೃವಾದ.

	ವಸ್ತು ಸ್ವತಂತ್ರವಾಗಿ ಇದ್ದರೂ ಪ್ರಮಾತೃವಿಗೆ ಅದರ ನೇರ ಅಥವಾ ಯಥಾರ್ಥ ಜ್ಞಾನ ಸಾಧ್ಯ ಎಂಬುದು ಕೆಲವು ವಾಸ್ತವಿಕವಾದಿಗಳ ಅಭಿಪ್ರಾಯ. ಇದನ್ನು ಪ್ರಾತಿನಿಧ್ಯವಾಸ್ತವಾದಿಗಳು ವಸ್ತುವಿನ ನೇರ ಅಥವಾ ಸಾಕ್ಷಾತ್ ಜ್ಞಾನ ಸಾಧ್ಯವಿದ್ದ ಪಕ್ಷದಲ್ಲಿ ಮನುಷ್ಯನಿಗೆ ಭ್ರಮೆಯೇ ಉಂಟಾಗುತ್ತಿರಲಿಲ್ಲ ಎಂದು ಖಂಡಿಸುವರು. ಅವರ ಪ್ರಕಾರ ಯಥಾರ್ಥ ಅಥವಾ ನೇರಜ್ಞಾನ ಬಾಹ್ಯವಸ್ತುವಿನದಾಗಿರದೇ, ಅದು ನಮ್ಮ ಮನಸ್ಸಿನಲ್ಲಿ ಉತ್ಪಾದಿಸುವ ಅದರ ಪ್ರತಿಬಿಂಬ ಅಥವಾ ಭಾವನೆಗೆ ಸೇರಿದ್ದು. ಭಾವನೆಗೂ ಅದನ್ನು ಉತ್ಪಾದಿಸುವ ಬಾಹ್ಯವಸ್ತುವಿಗೂ ಹೊಂದಾಣಿಕೆಯಿದೆಯೇ ಎಂಬುದನ್ನು ಪರೀಕ್ಷಿಸುವುದರಿಂದ ಜ್ಞಾನದ ಯಥಾರ್ಥತೆಯನ್ನು ನಿರ್ಧರಿಸಬಹುದು.

	ಆದರೆ ಪ್ರಾತಿನಿಧ್ಯವಾಸ್ತವಿಕವಾದ ಈ ಕೆಲವು ಆಕ್ಷೇಪಗಳಿಗೆ ಗುರಿಯಾಗಿದೆ. 1) ವಸ್ತುವಿನ ನೇರ ಜ್ಞಾನ ಅಸಾಧ್ಯವಾದ್ದರಿಂದ ವಸ್ತುವಿಗೂ ಮನಸ್ಸಿನಲ್ಲಿರುವ ಭಾವನೆಗೂ ತಾಳೆನೋಡುವುದು ಅಸಾಧ್ಯ. ಸತ್ತ ವ್ಯಕ್ತಿಯ ಭಾವಚಿತ್ರ ವ್ಯಕ್ತಿಯನ್ನು ಹೋಲುತ್ತದೆಯೆ ಎಂಬುದನ್ನು ಹೇಗೆ ಪರೀಕ್ಷಿಸಲು ಸಾಧ್ಯವಿಲ್ಲವೊ ಹಾಗೆಯೆ ನೇರಜ್ಞಾನಕ್ಕೆ ಸಿಲುಕದ ಬಾಹ್ಯವಸ್ತುವಿಗೂ ಅದು ಮನಸ್ಸಿನಲ್ಲಿ ಸೃಷ್ಟಿಸಬಹುದಾದ ಭಾವನೆಗೂ ತಾಳೆ ನೋಡುವುದೂ ಅಸಾಧ್ಯ. 2) ನೇರಜ್ಞಾನಕ್ಕೆ ಸಿಲುಕದ ವಸ್ತುವಿನ ಇರುವಿಕೆಯ ಸಂಶಯಾಸ್ಪದ. ಅರಿವಿನ ಕ್ಷೇತ್ರದಿಂದ ಸಂಪೂರ್ಣವಾಗಿ ಹೊರಗೆ ಇರಬಹುದಾದ ಅಂಥ ಆಜ್ಞೆಯ ಊಹೆಗೂ ನಿಲುಕದು. ಒಂದು ಪಕ್ಷ ಊಹೆಗೂ ನಿಲುಕಿದಲ್ಲಿ ಅದು ಅರಿವಿನ ಆಚೆಯಿದೆಯೆಂದು ಹೇಳಲಾಗುವುದಿಲ್ಲ. 3) ಮನಸ್ಸಿನಲ್ಲಿ ಏಳುವ ಭಾವನೆಯನ್ನು ಬಾಹ್ಯವಸ್ತುವೆ ನಿರ್ಧರಿಸುವುದಿಲ್ಲ. ಹಾಗಿದ್ದಲ್ಲಿ ಒಂದೇ ವಸ್ತು ಇಬ್ಬರು ವ್ಯಕ್ತಿಗಳಿಗೆ ಭಿನ್ನ ಆಕಾರವುಳ್ಳದ್ದಾಗಿ ತೋರುತ್ತಿರಲಿಲ್ಲ. ಪ್ರಮಾತೃವಿನ ನರಮಂಡಲದಲ್ಲಿ ಸಂಭವಿಸುವ ಬದಲಾವಣೆಗಳ ಮನಸ್ಸಿನ ಭಾವನೆಗೆ ಕಾರಣವಾಗಿರಬಹುದು. ಉದಾಹರಣೆಗೆ ನೆತ್ತಿಯ ಮೇಲೆ ಬಿದ್ದ ಪೆಟ್ಟಿನ ಪರಿಣಾಮವಾಗಿ ನಮಗೆ ಹಗಲಿನಲ್ಲೇ ನಕ್ಷತ್ರಗಳು ಗೋಚರಿಸಬಹುದು. ಅಲ್ಲದೇ (4) ಕಾರಣದ ಊಹೆ ಕಾರಣ-ಕಾರ್ಯದ ನಿಯತ ಸಂಬಂಧದ ಅರಿವನ್ನು ಆಧರಿಸಿದೆ. ಉದಾಹರಣೆಗೆ ನದಿ ತುಂಬಿ ಹರಿಯುತ್ತಿರುವುದಕ್ಕೆ ಮಳೆಯೆ ಕಾರಣ ಎಂದು ಊಹಿಸುವ ಮೊದಲು ಮಳೆ ಬೀಳುವುದರಿಂದ ನದಿಯಲ್ಲಿ ಪ್ರವಾಹ ಬರುತ್ತದೆ ಎಂಬುದನ್ನು ನೋಡಿರಬೇಕು. ಆದರೆ ಇಲ್ಲಿ ಬಾಹ್ಯವಸ್ತುಗಳಿಂದ ನಮ್ಮ ಮನಸ್ಸಿನಲ್ಲಿ ಭಾವನೆಗಳುಂಟಾಗುವುದನ್ನು ನಾವು ಕಂಡೇ ಇಲ್ಲ. ಏಕೆಂದರೆ ಬಾಹ್ಯವಸ್ತುಗಳ ನೇರಜ್ಞಾನವೆ ಸಾಧ್ಯವಿಲ್ಲವಾದ್ದರಿಂದ ಬಾಹ್ಯವಸ್ತುಗಳಲ್ಲಿ ಭಾವನೆಗಳ ಮೂಲವನ್ನು ಹುಡುಕುವುದು ಸರಿಯಲ್ಲ.

	ಈ ಎಲ್ಲ ಆಕ್ಷೇಪಗಳು ಪ್ರಮಾತೃವಾದಕ್ಕೆಡೆಮಾಡಿಕೊಟ್ಟಿವೆ. ಮನೋಗ್ರಾಹ್ಯವಲ್ಲದ ವಸ್ತುಗಳೆಲ್ಲವೂ ಮಿಥ್ಯೆಯೆಂದು ಸಾರುವ ಪ್ರಮಾತೃವಾದದ ಪ್ರಕಾರ ವಸ್ತುವಿನ ಇರವು ಅದರ ಅರಿವಿಗೆ ಅಧೀನ ಮನಸ್ಸು ಮತ್ತು ಅದರ ಭಾವನೆಗಳು ಮಾತ್ರ ಸತ್ಯ ಎಂಬುದು ಪ್ರಮಾತೃವಾದದಿಂದ ನಾವು ಹೊರಗೆಳೆಯಬಹುದಾದ ತೀರ್ಮಾನ. ಈ ಪ್ರಮಾತೃವಾದದ ಜನಕ 18ನೆಯ ಶತಮಾನದ ಬಿಷಪ್ ಬಾಕ್ರ್ಲೆ ಎಂಬ ಬ್ರಿಟಿಷ್ ತತ್ತ್ವಜ್ಞಾನಿ.	

	ಭಾರತೀಯ ತತ್ತ್ವಶಾಸ್ತ್ರದಲ್ಲಿ ಯೋಗಾಚಾರ ಬೌದ್ಧರು ಮಂಡಿಸುವ ವಿಜ್ಞಾನವಾದ ಬಾಕ್ರ್ಲೆಯ ಪ್ರಮಾತೃವಾದವನ್ನೇ ಹೋಲುತ್ತದೆ. ಪ್ರಮಾತೃವಾದದಂತೆಯೆ ವಿಜ್ಞಾನವಾದವೂ ಸತ್ಯ ಕೇವಲ ಚಿಂತನೆಗಳ ಸರಣಿ ಅಥವಾ ವಿಜ್ಞಾನ ಎಂದು ಹೇಳುತ್ತದೆ. ಅದರ ಪ್ರಕಾರ ಈ ಚಿಂತನೆಗಳಿಗೆ ಅನುಗುಣವಾದ ವಸ್ತು ಹೊರಗೆ ಇರುವುದಿಲ್ಲ. ಬಾಕ್ರ್ಲೆಗೂ ವಿಜ್ಞಾನವಾದಿಗಳಿಗೂ ಒಂದು ವ್ಯತ್ಯಾಸವಿದೆ. ಮನಸ್ಸಿನ ಭಾವನೆಗಳಿಗೆ ಈಶ್ವರನೇ ಕಾರಣ ಎಂದು ಬಾಕ್ರ್ಲೆ ನುಡಿದರೆ ಹಿಂದಿನ ಅನುಭವಗಳಿಂದ ಉಂಟಾದ ವಾಸನೆಗಳೇ (ಆಲಯ ವಿಜ್ಞಾನ) ಭಾವನೆಗಳಿಗೆ ಕಾರಣ ಎಂದು ವಿಜ್ಞಾನವಾದಿಗಳು ನುಡಿಯುತ್ತಾರೆ. ಅಲ್ಲದೆ ಈ ಭಾವನೆಗಳು ಅನಾದಿಯಾಗಿರುವುದರಿಂದ ಸೃಷ್ಟಿಯಲ್ಲಿನ ಪ್ರಥಮ ಭಾವನೆಗೆ ಕಾರಣ ಹುಡುಕುವುದು ಮೂರ್ಖತನವೆಂದು ಸಾರುತ್ತಾರೆ.

	ಪ್ರಮಾತೃವಾದ ಈ ಕೆಲವು ಆಕ್ಷೇಪಗಳಿಗೆ ಗುರಿಯಾಗಿದೆ: 1) ಪ್ರಮಾತೃವಾದ ಭಾವನೆಗಳಿಗೆ ಅನುಗುಣವಾದ ಬಾಹ್ಯವಸ್ತುಗಳನ್ನು ನಿರಾಕರಿಸುವುದರಿಂದ-ವಸ್ತುಸ್ಥಿತಿಗೂ ಭ್ರಾಂತಿಗೂ ಇರಬಹುದಾದ ವ್ಯತ್ಯಾಸವನ್ನು ಕಡೆಗಣಿಸಿದಂತಾಗುತ್ತದೆ. 2) ಪ್ರಮಾತೃವಿನ ಹೊರತಾಗಿ ಭೌತ ವಸ್ತುಗಳಲ್ಲದೇ ಮನಸ್ಸಿನ ಹೊರಗೆ ಇರಬಹುದಾದ ಇತರ ಪ್ರಮಾತೃಗಳನ್ನು ನಿರಾಕರಿಸಬೇಕಾಗುವುದರಿಂದ ಪ್ರಮಾತೃವಾದ ಸ್ವಾತ್ಮೈಕವಾದದಲ್ಲಿ ಪರ್ಯವಸಾನ ಹೊಂದುತ್ತದೆ. 3) ಅನುಭವಗ್ರಾಹ್ಯವಲ್ಲದ ಈಶ್ವರನ ವಸ್ತುನಿಷ್ಠ ಅಥವಾ ಸ್ವತಂತ್ರ ಅಸ್ತಿತ್ವವನ್ನು ನಂಬುವುದರಿಂದ ಬಾಕ್ರ್ಲೆಯ ಪ್ರಮಾತೃವಾದ ಸ್ವಯಂ-ವಿರೋಧವಾಗಿದೆ. 4) ಪ್ರಮಾತೃವಾದದ ಪ್ರಕಾರ ಎಲ್ಲವೂ ವ್ಯಕ್ತಿನಿಷ್ಠವಾಗಿರುವುದರಿಂದ ಪ್ರಮಾತೃವಾದವೂ ಒಂದು ವ್ಯಕ್ತಿನಿಷ್ಠವಾದವಾಗಿ ಅದು ತನ್ನ ಸಾರ್ವತ್ರಿಕ ಸತ್ಯತೆಯನ್ನು ಕಳೆದುಕೊಳ್ಳುತ್ತದೆ. 5) ಮನೋಗ್ರಾಹ್ಯ ವಸ್ತುಗಳೆಲ್ಲವೂ ಮನೋಬಾಹ್ಯ ಅಸ್ತಿತ್ವವನ್ನು ಪಡೆದಿಲ್ಲವೆಂಬುದು ಸರಿಯಲ್ಲ. ವ್ಯಕ್ತಿದ್ವಯರ ನಡುವೆ ಸಂಭವಿಸಬಹುದಾದ ಕಲಹದ ವಸ್ತುನಿಷ್ಠ ಅಸ್ತಿತ್ವವನ್ನು ನಿರಾಕರಿಸಿ ಕಲಹ ಕೇವಲ ಅವರಲ್ಲೊಬ್ಬನ ಮನಸ್ಸಿನಲ್ಲಿ ನಡೆಯುವ ಕ್ರಿಯೆಯೆಂದು ಹೇಳಲಾಗುವುದಿಲ್ಲ. 6) ಪ್ರಮೇಯ ಸಾಪೇಕ್ಷವಾಗಿದ್ದರೂ ಅದರ ಸ್ವತಂತ್ರ ಅಸ್ತಿತ್ವಕ್ಕೆ ಧಕ್ಕೆ ಬರುವುದಿಲ್ಲ. ಶಿಷ್ಯನಿಲ್ಲದವ ಗುರುವಾಗಲಾರನಾದರೂ ಮನುಷ್ಯನಾಗಿ ಇರಬಲ್ಲ.

	ಪ್ರಮಾತೃವಾದ ತತ್ತ್ವಜ್ಞರಿಗೆ ಪ್ರಯೋಜನಕಾರಿಯಾಗುವ ಕೆಲ ಮುಖ್ಯ ಸಮಸ್ಯೆಗಳನ್ನು ಮುಂದೊಡ್ಡಿದೆ. ವಿಚಾರಕ್ಕೆ ಪ್ರಚೋದನೆ ನೀಡುವ ಅದ ಜ್ಞಾನಕ್ಕೂ ಜ್ಞೇಯಕ್ಕೂ ಇರಬಹುದಾದ ಸಂಬಂಧದ ಸೂಕ್ತವಿಶ್ಲೇಷಣೆಯ ಆವಶ್ಯಕತೆಯನ್ನು ಒತ್ತಿಹೇಳಿದೆ. ಜ್ಞಾನಜ್ಞೇಯಗಳ ಸಂಬಂಧ ಸುಲಭಗ್ರಾಹ್ಯವೆಂದ್ಯ ತಿಳಿದಿರುವ ಸಾಮಾನ್ಯಪ್ರಜ್ಞೆಗೆ ಅದು ವಿಮರ್ಶಾತ್ಮಕ ದೃಷ್ಟಿಯನ್ನು ಒದಗಿಸಿದೆ. ಜ್ಞಾನ-ಜ್ಞೇಯಗಳ ಸಂಬಂಧದ ಮೇಲೆ ನಡೆಸಬಹುದಾದ ಪರೀಕ್ಷಾತ್ಮಕ ವಿಚಾರಕ್ಕೆ ಅದು ತಳಹದಿಯನ್ನು ಒದಗಿಸಿದೆ.
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ